ನಾಡು, ಇತಿಹಾಸ ಮತ್ತು ಪ್ರಮುಖ ವ್ಯಕ್ತಿಗಳು
ಬಹಮನಿ ರಾಜವಂಶ (ಕ್ರಿ.ಶ.1347-1538)

ಕರ್ನಾಟಕ ಮತ್ತು ಆಂಧ್ರಪ್ರದೇಶದ ಹಲವು ಭಾಗಗಳಲ್ಲಿ, ಹೆಚ್ಚು ಕಡಿಮೆ ಎರಡು ಶತಮಾನಗಳ ಕಾಲ ರಾಜ್ಯಭಾರ ಮಾಡಿದ ಬಹಮನಿ ರಾಜವಂಶವು, ಕರ್ನಾಟಕದ ಇತಿಹಾಸದಲ್ಲಿ ಮುಖ್ಯವಾದ ಪಾತ್ರವನ್ನು ವಹಿಸಿದೆ. ಆ ಸಾಮ್ರಾಜ್ಯವು, ಮುಹಮ್ಮದ್ ಬಿನ್ ತುಘಲಕ್ ನ ಪ್ರತಿನಿಧಿಗಳಾಗಿ ಅವನ ಚಕ್ರಾಧಿಪತ್ಯದ ದಕ್ಷಿಣ ಭಾಗಗಳನ್ನು ಆಳುತ್ತಿದ್ದ ಅಮೀರರಿಂದ ಸ್ಥಾಪಿತವಾಯಿತು. ಅವರು ತುಘಲಕನ ವಿರುದ್ಧ ದಂಗೆಯೆದ್ದು, ಹಸನ್ ಗಂಗೂ ಎನ್ನುವವನನ್ನು ತಮ್ಮ ನಾಯಕನಾಗಿ ಆರಿಸಿಕೊಂಡರು. ತನ್ನನ್ನು ದಖನ್ ಪ್ರದೇಶಗಳ ಸುಲ್ತಾನನೆಂದು ಘೋಷಿಸಿಕೊಂಡ ಹಸನ್ ಗಂಗೂ, ದೌಲತಾಬಾದನ್ನು ರಾಜಧಾನಿಯಾಗಿ ಮಾಡಿಕೊಂಡು ಆಳತೊಡಗಿದನು. ಅವನಿಗೆ ಅಲ್ಲಾವುದ್ದೀನ್ ಹಸನ್ ಬಹಮನ್ ಷಾ ಎಂಬ ಹೊಸ ಹೆಸರು ಬಂತು. ಯುದ್ಧ ಮತ್ತು ರಾಜತಂತ್ರಗಳೆಂಬ ಎರಡೂ ಬಗೆಗಳಲ್ಲಿ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವುದು, ಅವನಿಗೆ ಸಾಧ್ಯವಾಯಿತು. ಅವನು ಗುಲ್ಬರ್ಗ, ವಾರಂಗಲ್ಲು, ಜಮಖಂಡಿ, ಕಲ್ಯಾಣ, ದೆಬೋಲಿಮ್, ಗೋವಾ ಮುಂತಾದ ಮುಖ್ಯ ಸ್ಥಳಗಳ ಮೇಲೆ, ಹಂತ ಹಂತವಾಗಿ ಹತೋಟಿ ಪಡೆದನು. ಒಂದು ಘಟ್ಟದಲ್ಲಿ, ಅವನ ರಾಜ್ಯವು ಉತ್ತರದ ಬೇರಾರ್ ನಿಂದ ದಕ್ಷಿಣದ ಕೃಷ್ಣಾ ನದಿಯವರೆಗೆ, ಅಂತೆಯೇ ಪಶ್ಚಿಮದ ಅರಬ್ಬೀ ಸಮುದ್ರದಿಂದ ಪೂರ್ವದ ಹೈದರಾಬಾದಿನವರೆಗೆ ಹರಡಿಕೊಂಡಿತ್ತು. ಆಡಳಿತದ ಸೌಕರ್ಯಕ್ಕಾಗಿ, ಅವನು ತನ್ನ ರಾಜ್ಯವನ್ನು ನಾಲ್ಕು ವಿಭಾಗಗಳಾಗಿ(ತರಫ್) ವಿಂಗಡಿಸಿದನು. ಬೀದರ್, ಬೇರಾರ್, ಹೈದರಾಬಾದ್ ಮತ್ತು ಗುಲ್ಬರ್ಗಗಳು ಈ ವಿಭಾಗಗಳ ಕೇಂದ್ರಗಳಾಗಿದ್ದವು. ಅವನು ಪ್ರಜಾಹಿತೈಷಿಯಾದ ದೊರೆಯಾಗಿದ್ದನು. ಹಿಂದೂಗಳ ಮೇಲೆ ತಲೆಗಂದಾಯವನ್ನು(ಜೆಜಿಯಾ) ಹೇರದ ಮೊದಲ ಮುಸ್ಲಿಂ ದೊರೆ ಹಸನ್ ಗಂಗೂ. ಅವನು, ಆಮದಾದ ವಸ್ತುಗಳ ಮೇಲೆ ತೆರಿಗೆ ಹೇರುವುದರಿಂದ ಸ್ಥಳೀಯವಾದ ಉತ್ಪಾದನೆ ಹಾಗೂ ವ್ಯಾಪಾರಗಳಿಗೆ ಉತ್ತೇಜನ ನೀಡಿದನು. ಸ್ವಲ್ಪ ಕಾಲದ ನಂತರ, ಅವನು ತನ್ನ ರಾಜಧಾನಿಯನ್ನು ಗುಲ್ಬರ್ಗಕ್ಕೆ ವರ್ಗಾಯಿಸಿ ಅದಕ್ಕೆ ಎಹ್ಸಾನಾಬಾದ್ ಎಂಬ ಹೊಸ ಹೆಸರು ಕೊಟ್ಟನು.

ಬಹಮನ್ ಷಾನ ನಂತರ, ಅವನ ಹಿರಿಯ ಮಗನಾದ ಮಹಮೂದ್ ಷಾ-1(1358-75) ಪಟ್ಟಕ್ಕೆ ಬಂದನು. ರಾಜ್ಯವನ್ನು ಸ್ಥಿರಗೊಳಿಸಿ, ಶಾಂತಿ ಮತ್ತು ಸಮೃದ್ಧಿಗಳನ್ನು ನೆಲೆಗೊಳಿಸುವುದು ಅವನಿಗೆ ಸಾಧ್ಯವಾಯಿತು. ಅವನು ವಿಜಯನಗರ ಸಾಮ್ರಾಜ್ಯ ಮತ್ತು ತೆಲಂಗಾಣ ಪ್ರದೇಶದ ದೊರೆಯ ಮೇಲೆ ಯುದ್ಧ ಹೂಡಿ, ಮುದ್ಗಲ್ ಮತ್ತು ಗೋಲ್ಕೊಂಡಾಗಳನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡನು. ಅವನ ಆಳ್ವಿಕೆಯಲ್ಲಿ ಅನೇಕ ಆಡಳಿತಾತ್ಮಕ ಸುಧಾರಣೆಗಳು ಜಾರಿಗೆ ಬಂದವು.

ಮಹಮೂದ್ ಷಾನ ನಂತರ ಬಂದ ಅನೇಕ ದೊರೆಗಳ ರಾಜ್ಯಭಾರವು ಅಧಿಕಾರಕ್ಕೋಸ್ಕರ ನಡೆಯುವ ಒಳಜಗಳಗಳು ಮತ್ತು ಅಸ್ಥಿರತೆಯಿಂದ ಪೀಡಿತವಾಗಿದ್ದವು. ಆದರೆ, ಸುಮಾರು ಇಪ್ಪತ್ತೈದು ವರ್ಷಗಳು ರಾಜ್ಯವಾಳಿದ ತಾಜುದ್ದೀನ್ ಫೈರೋಜ್ ನ ಆಳ್ವಿಕೆಯಲ್ಲಿ, ಬಹಮನಿ ರಾಜ್ಯವು ತನ್ನ ವೈಭವವನ್ನು ಮರಳಿ ಪಡೆಯಿತು.(1397-1422) ರಾಯಚೂರಿನ ದೋ ಆಬ್ ಪ್ರದೇಶದ ಮೇಲೆ ಮತ್ತೆ ನಿಯಂತ್ರಣವನ್ನು ಸಾಧಿಸಿದ ಫೈರೋಜ್, ತೈಮೂರನ ರಾಜಾಸ್ಥಾನಕ್ಕೆ ತನ್ನ ರಾಯಭಾರಿಯನ್ನು ಕಳಿಸಿದ್ದನು. 1422 ರಲ್ಲಿ, ಅವನ ಸೋದರನಾದ ಶಿಹಾಬುದ್ದೀನ್, ಅಣ್ಣನನ್ನು ಪದಚ್ಯುತನಾಗಿ ಮಾಡಿ ರಾಜನಾದನು. ಅವನು ತನ್ನ ರಾಜಧಾನಿಯನ್ನು ಗುಲ್ಬರ್ಗದಿಂದ ಬೀದರ್ ನಗರಕ್ಕೆ ಬದಲಾಯಿಸಿಕೊಂಡನು. ಅವನ ಆಳ್ವಿಕೆಯಲ್ಲಿ ಅನೇಕ ಯುದ್ಧಗಳಲ್ಲಿ ಗೆಲುವು ದೊರಕಿತು. ವಿಜಯನಗರದ ಅರಸರು, ವಾರಂಗಲ್, ಗುಜರಾತ್ ಮತ್ತು ಮಾಳ್ವಗಳ ರಾಜರಿಂದ ಭೂಭಾಗಗಳನ್ನೂ ಬಗೆಬಗೆಯ ಕಪ್ಪ ಕಾಣಿಕೆಗಳನ್ನೂ ಪಡೆಯಲು ಅವನಿಗೆ ಸಾಧ್ಯವಾಯಿತು. ಅನೇಕ ಆಡಳಿತಾತ್ಮಕ ಹಾಗೂ ಸಾಮಾಜಿಕ ಸುಧಾರಣೆಗಳನ್ನು, ಜಾತ್ಯತೀತವಾದ ರೀತಿಯಲ್ಲಿ ಜಾರಿಗೆ ತಂದುದರಿಂದ ಅವನ ಆಳ್ವಿಕೆಯು ವಿಶಿಷ್ಟವಾಗಿದೆ.

ಅನಂತರದ ಐವತ್ತು ವರ್ಷಗಳು, ರಾಜರಿಗಿಂತ ಹೆಚ್ಚಾಗಿ, ಪ್ರಧಾನಮಂತ್ರಿಯಾಗಿದ್ದ ಮಹಮೂದ್ ಗವಾನನ ಸಾಧನೆಗಳಿಗಾಗಿ ಪ್ರಸಿದ್ಧವಾಗಿದೆ. ಮೂವರು ರಾಜರುಗಳ ಕೈಕೆಳಗೆ ಕೆಲಸ ಮಾಡಿದ ಗವಾನನು ತನ್ನ ಆಶ್ರಯದಾತರಿಗೆ ಮಾತ್ರವಲ್ಲ, ಸಾರ್ವಜನಿಕರಿಗೂ ಹಲವು ಬಗೆಯಲ್ಲಿ ಸೇವೆ ಸಲ್ಲಿಸಿದನು. ಅವನು ಶ್ರೀಮಂತ ವರ್ತಕನಾಗಿದ್ದನು. ಗವಾನ್ ವಿದ್ವಾಂಸ, ಶಿಕ್ಷಣತಜ್ಞ ಮತ್ತು ಕಲೆಗಳಲ್ಲಿ ಅಪಾರ ಆಸಕ್ತಿಯುಳ್ಳ ರಸಿಕನೆಂದು ಹೆಸರುವಾಸಿಯಾಗಿದ್ದನು. ಅವನು ಇಸ್ಲಾಂ ಸಂಸ್ಕೃತಿ, ಪರ್ಶಿಯನ್ ಭಾಷೆ ಮತ್ತು ಗಣಿತಶಾಸ್ತ್ರಗಳಲ್ಲಿ ನಿಷ್ಣಾತನಾಗಿದ್ದನು. 1472 ರಲ್ಲಿ ಅವನು, ಬಹಮನಿ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಬೀದರ್ ನಲ್ಲಿ ಒಂದು ಮದ್ರಸಾವನ್ನು ಕಟ್ಟಿಸಿದನು.(ಶಾಲೆ) ಅದು ಮೂರು ಮಹಡಿಗಳಿರುವ ಭವ್ಯ ಸೌಧ. ಅದರ ನಾಲ್ಕು ಮೂಲೆಗಳಲ್ಲಿ ನೂರು ಅಡಿ ಎತ್ತರದ ಮಿನಾರೆಟ್ ಗಳಿದ್ದವು.(ಸ್ತಂಭ) ಅಲ್ಲಿನ ಗ್ರಂಥಭಂಡಾರದಲ್ಲಿ 3000 ಕ್ಕಿಂತ ಹೆಚ್ಚು ಹಸ್ತಪ್ರತಿಗಳಿದ್ದವು. ವಿದ್ಯಾರ್ಥಿಗಳ ವಾಸಕ್ಕೆಂದು 36 ಕೊಠಡಿಗಳೂ ಅಧ್ಯಾಪಕರ ವಾಸಕ್ಕೆಂದು 6 ಮನೆಗಳೂ ಇದ್ದವು. ಅಲ್ಲಿ ವಿಶಾಲವಾದ ಉಪನ್ಯಾಸದ ಕೊಠಡಿಗಳನ್ನು ನಿರ್ಮಿಸಲಾಗಿತ್ತು. ಪ್ರತ್ಯೇಕವಾದ ಪ್ರಾರ್ಥನಾಮಂದಿರ ಮತ್ತು ಅತ್ಯುತ್ತಮವಾದ ಗ್ರಂಥಾಲಯಗಳು ಅದರ ಉಪಯುಕ್ತತೆಯನ್ನು ಹೆಚ್ಚಿಸಿದ್ದವು. ಗವಾನನ ಸ್ವಂತ ಪುಸ್ತಕಭಂಡಾರದಲ್ಲಿಯೇ ಒಂದು ಸಾವಿರ ಪುಸ್ತಕಗಳಿದ್ದವು. ಇಂತಹ ಸಾಂಸ್ಕೃತಿಕ ಸಾಧನೆಗಳಲ್ಲದೆ, ಗವಾನನು ತನ್ನ ಸಾಮ್ರಾಟರು ಕೈಗೊಂಡ ಆಡಳಿತಾತ್ಮಕ ಸುಧಾರಣೆಗಳ ಹಾಗೂ ಮಿಲಿಟರಿ ಕಾರ್ಯಾಚರಣೆಗಳ ಅನಿವಾರ್ಯ ಭಾಗವಾಗಿದ್ದನು. ಮೂರನೆಯ ಮಹಮೂದ ಷಾನ ಆಳ್ವಿಕೆಯಲ್ಲಿ, ರಾಜದ್ರೋಹಿಯೆಂಬ ಹುರುಳಿಲ್ಲದ ಆಪಾದನೆಗಳನ್ನು ಹೇರಿ, ಅವನನ್ನು ಗಲ್ಲಿಗೆ ಏರಿಸಲಾಯಿತು. ಪ್ರಾಮಾಣಿಕನೂ ದಕ್ಷನೂ ಪ್ರಜಾಹಿತೈಷಿಯೂ ಆಗಿದ್ದ ವ್ಯಕ್ತಿಯೊಬ್ಬನು ಈ ರೀತಿಯ ಅಂತ್ಯವನ್ನು ಕಂಡಿದ್ದು ದುಃಖದ ಸಂಗತಿ.

ಮಹಮೂದ್ ಗವಾನನ ಸಾವಿನೊಂದಿಗೆ, ಬಹಮನಿ ಸಾಮ್ರಾಜ್ಯದ ವಿಭಜನೆಯು ಮೊದಲಾಯಿತು. 1518 ರಿಂದ 1538 ರವರೆಗೆ ಆಡಳಿತ ನಡೆಸಿದ ಅಹ್ಮದ್-4 ರಿಂದ ಮೊದಲಾಗಿ ಕಲೀಮುಲ್ಲಾವರೆಗಿನ ನಾಲ್ಕು ಜನ ರಾಜರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಆ ಸಮಯದಲ್ಲಿ ಬೇರಾರ್, ಅಹಮದ್ ನಗರ, ಬಿಜಾಪುರ ಮತ್ತು ತೆಲಂಗಾಣ ಪ್ರದೇಶಗಳ ಸಾಮಂತ ರಾಜರುಗಳು ತಾವು ಸ್ವತಂತ್ರರೆಂದು ಘೋಷಿಸಿಕೊಂಡರು. ಇದರೊಂದಿಗೆ ಬಹಮನಿ ಸಾಮ್ರಾಜ್ಯವು ಅಂತ್ಯವನ್ನು ಕಂಡಿತು.

ಬಹಮನಿಗಳ ಆಳ್ವಿಕೆಯು, ಸೈನ್ಯ, ಆಡಳಿತ ಮತ್ತು ಶಾಸಕಾಂಗಗಳೆಂಬ ಮೂರು ವಿಭಾಗಗಳಲ್ಲಿಯೂ ಜಾರಿಗೆ ತಂದ ಸುಧಾರಣೆಗಳಿಗಾಗಿ ಪ್ರಸಿದ್ಧವಾಗಿದೆ. ಅವುಗಳನ್ನು ಹಲವು ರಾಜರು ಹಂತಹಂತವಾಗಿ ಜಾರಿಗೆ ತಂದರು. ಆಗ ಸಮುದಾಯಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳಲ್ಲಿ ಅನೇಕ ಪರಿವರ್ತನೆಗಳಾದವು. ಅದು ಹಳ್ಳಿಯ ಮುಖಂಡರ ಸ್ವಾತಂತ್ರ್ಯವು ಕ್ರಮೇಣ ಕಡಿಮೆಯಾಗುತ್ತಿದ್ದ ಕಾಲ. ಒಂದು ಬಗೆಯ ಕೇಂದ್ರೀಕರಣವು ಆ ಪರಿವರ್ತನೆಯ ಮುಖ್ಯ ಲಕ್ಷಣ. ಆಗ, ಪಾಳೆಯಗಾರೀ ಪದ್ಧತಿಯ(ಫ್ಯೂಡಲಿಸಂ) ಕಡೆಗಿನ ಚಲನೆಯ ತೀವ್ರಗತಿಯಲ್ಲಿ ನಡೆಯುತ್ತಿತ್ತು. ರಾಜರುಗಳು ಬಹುಮಟ್ಟಿಗೆ ಜಾತ್ಯತೀತರಾಗಿದ್ದು ಎಲ್ಲ ಧರ್ಮಗಳನ್ನೂ ಸಹಿಷ್ಣುತೆಯಿಂದ ನೋಡುತ್ತಿದ್ದರು. ಅಖಿಲ ಭಾರತ ವ್ಯಾಪ್ತಿಯ ಭಕ್ತಿ ಚಳುವಳಿಯು, ಜನಜೀವನದ ಮೇಲೆ ಪರಿಣಾಮ ಬೀರಿತ್ತು. ಸೂಫಿ ಧರ್ಮ ಕೂಡ ಜನಸಾಮಾನ್ಯರಲ್ಲಿ ಭದ್ರವಾದ ನೆಲೆಯನ್ನು ಪಡೆದಿತ್ತು. ಅದಕ್ಕೆ ರಾಜರುಗಳ ಬೆಂಬಲವೂ ಇತ್ತು. ವಾಸ್ತಶಿಲ್ಪ ಮತ್ತು ಶಿಲ್ಪಗಳ ಕ್ಷೇತ್ರದಲ್ಲಿ ಬಹಮನಿ ರಾಜವಂಶದ ಸಾಧನೆಯನ್ನು ಮುಖ್ಯವಾಗಿ ಬಿಜಾಪುರ, ಗುಲ್ಬರ್ಗ ಮತ್ತು ಬೀದರ್ ಗಳಲ್ಲಿ ನೋಡಬಹುದು. ಅವರ ಕಾಲದಲ್ಲಿ ನಿಲ್ಲಿಸಲಾದ ಬಹುಪಾಲು ಶಾಸನಗಳು, ಅರಾಬಿಕ್ ಮತ್ತು ಪರ್ಶಿಯನ್ ಭಾಷೆಗಳಲ್ಲಿವೆ. ಅವುಗಳಲ್ಲಿ ಕೆಲವು, ಕನ್ನಡ, ಮರಾಠಿ ಮತ್ತು ತೆಲುಗು ಭಾಷೆಗಳನ್ನು ಬಳಸುವ ದ್ವಿಭಾಷಿಕ ಶಾಸನಗಳು. ಅವು ಲಿಪಿಸೌಂದರ್ಯದ ದೃಷ್ಟಿಯಿಂದ(ಕ್ಯಾಲಿಗ್ರಫಿ) ಆಸಕ್ತಿಕರವಾಗಿವೆ. ಬಹಮನಿ ಸಾಮ್ರಾಜ್ಯವು ದೌಲತಾಬಾದು, ಬೀದರ್ ಮತ್ತು ಗುಲ್ಬರ್ಗಗಳಲ್ಲಿ ತನ್ನದೇ ಆದ ನಾಣ್ಯಶಾಲೆಗಳನ್ನು ಹೊಂದಿತ್ತು.

ಒಟ್ಟಿನಲ್ಲಿ ಹೇಳುವುದಾದರೆ, ಬಹಮನಿಗಳ ಆಳ್ವಿಕೆಯು ಕರ್ನಾಟಕದ ರಾಜಕೀಯ ಮತ್ತು ಸಾಂಸ್ಕೃತಿಕ ಚರಿತ್ರೆಯ ಮುಖ್ಯವಾದ ಅಧ್ಯಾಯಗಳಲ್ಲಿ ಒಂದು

.

ಮುಂದಿನ ಓದು ಮತ್ತು ಲಿಂಕುಗಳು:

    1. The Bahamanis of the Deccan, H.K. Sherwani, 1985, Munshiram Manoharlal Publishers, New Delhi
    2. The Kingdom of Ahmednagar, R. Shyam, 1966, Motilal Banarsidass
    3. History of Bijapur, D.C. Verma, 1974, Kumar Brothers
    4. Dakhini Urdu as a Vehicle of Social Interaction

ಮುಖಪುಟ / ನಾಡು, ಇತಿಹಾಸ ಮತ್ತು ಪ್ರಮುಖ ವ್ಯಕ್ತಿಗಳು